ಭದ್ರಬಾಹು  - 

	ಜೈನ ಆಚಾರ್ಯರು. ಈ ಹೆಸರಿನವರು ಮೂರು ಮಂದಿ ಇದ್ದಾರೆ; ಶ್ರುತಕೇವಲಿ ಭದ್ರಬಾಹು, ಅಷ್ಟಾಂಗ ಶ್ರುತಪಾಠಿ ಭದ್ರಬಾಹು, ಆಚಾರಾಂಗ ಶ್ರುತಧಾರಿ ಭದ್ರಬಾಹು.

	ವಡ್ಡಾರಾಧನೆ ಮುಂತಾದ ಕಥಾ ಸಾಹಿತ್ಯದಲ್ಲಿ ಭದ್ರಬಾಹುವಿನ ವಿಷಯ ಕಲಸುಮೇಲೋಗರವಾಗಿದೆ. ಭದ್ರಬಾಹುವಿಗೂ ಚಂದ್ರಗುಪ್ತನಿಗೂ ಗಂಟು ಹಾಕುವಾಗಲೂ ಮೂರು ಜನ ಚಂದ್ರಗುಪ್ತರ (ನಂದ ಚಂದ್ರಗುಪ್ತ, ಮೌರ್ಯ ಚಂದ್ರಗುಪ್ತ, ಸಂಪ್ರತಿ ಚಂದ್ರಗುಪ್ತ) ಕಥೆಯೂ ಕಲಬೆರಕೆಯಾಗಿದೆ.

	ಶ್ರವಣಬೆಳಗೊಳಕ್ಕೆ ಶ್ರುತಕೇವಲಿ ಭದ್ರಬಾಹುವಿನೊಡನೆ ಬಂದವ ಮೌರ್ಯ ಚಂದ್ರಗುಪ್ತ ಎಂದು ರೈಸ್ ಹೇಳಿರುವರು. ಶ್ರವಣಬೆಳಗೊಳಕ್ಕೆ  ಬಂದವ ಎರಡನೆಯ ಭದ್ರಬಾಹು, ಇವನೊಡನೆ ಇದ್ದವ ಗುಪ್ತಿಗುಪ್ತ ಎಂದಿದ್ದಾರೆ ಫ್ಲೀಟ್.

	ಗೋವಿಂದ ಪೈ ಅವರ ಪ್ರಕಾರ ಶ್ರುತಕೇವಲಿ ಭದ್ರಬಾಹುವಿನೊಡನೆ ದಕ್ಷಿಣಾ ಪಥಕ್ಕೆ ಬಂದವ ಸಂಪ್ರತಿ ಚಂದ್ರಗುಪ್ತ. ಇಲ್ಲಿ ಅವರು ವಡ್ಡಾರಾಧನೆಯನ್ನೇ ಪುನರುಚ್ಚರಿಸಿದ್ದಾರೆ.

	ಮಹಾಪದ್ಮ ನಿಗ್ರಂಥ ಮುನಿಗಳ ವಿಹಾರಕ್ಕೆ ಅಡ್ಡಿಪಡಿಸಿದಾಗ ಶ್ರುತಕೇವಲಿ ಭದ್ರಬಾಹು ದಕ್ಷಿಣಾಪಥಕ್ಕೆ ಬಂದ. ಇವನನ್ನು ಹಿಂಬಾಲಿಸಿದವ ನಂದ ಚಂದ್ರಗುಪ್ತ (ಮೌರ್ಯ ಚಂದ್ರಗುಪ್ತನ ಅಜ್ಜ). ಮಹಾವೀರನ ಅನಂತರ 162 ವರ್ಷ ಕಳೆದ ಮೇಲೆ ಶ್ರುತಕೇವಲಿ ಭದ್ರಬಾಹು ಸ್ವರ್ಗಸ್ಥನಾದ. ಅಂದರೆ ಕ್ರಿ.ಶ. 365ರಲ್ಲಿ ಈತ ಶ್ರವಣಬೆಳಗುಳದಲ್ಲಿ ಸ್ವರ್ಗಸ್ಥನಾದ. ಈತ ಗೌತಮನ ಅನಂತರ 8ನೆಯ ಆಚಾರ್ಯ.

	ಎರಡನೆಯ ಭದ್ರಬಾಹು 36ನೆಯ ಆಚಾರ್ಯ. ವೀರನಿರ್ವಾಣವಾಗಿ 565 ವರ್ಷದ ಮೇಲೆ ಈತ ಕಾಲವಾದ. ಕ್ರಿ.ಶ. 37ರಲ್ಲಿ ಈತ ಕಾಲವಾಗಿರುವ. ಮೂರನೆಯ ಭದ್ರಬಾಹು 37ನೆಯ ಆಚಾರ್ಯ. ಈತ ವೀರನಿರ್ವಾಣಾನಂತರ 633ವರ್ಷ ಕಳೆದಮೇಲೆ ಅಂದರೆ ಕ್ರಿ.ಶ. 106ರಲ್ಲಿ ಶ್ರವಣಬೆಳಗೊಳದಲ್ಲಿ ಕಾಲವಾದ.
ಶ್ರುತಕೇವಲಿ ಭದ್ರಬಾಹು ದಕ್ಷಿಣಾಪಥಕ್ಕೆ ಬಂದಿರುವುದಂತೂ ನಿಜ. ಶ್ರವಣಬೆಳಗೊಳ, ಶ್ರೀರಂಗಪಟ್ಟಣಗಳಲ್ಲಿ ಈ ಬಗ್ಗೆ ಶಾಸನಗಳಿವೆ. ಒಟ್ಟಾರೆ ಶ್ರುತಕೇವಲಿ ಭದ್ರಬಾಹು ಕ್ರಿ.ಪೂ 36ರಲ್ಲೂ ಮೂರನೆಯ ಭದ್ರಬಾಹು ಕ್ರಿ.ಶ. 106ರಲ್ಲೂ ಶ್ರವಣಬೆಳಗೊಳದಲ್ಲಿ ಸ್ವರ್ಗಸ್ಥರಾಗಿರುವರು.
(ಬಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ